Friday, December 26, 2008

ಒಂಟಿತನದ ಗುರುವೇ ಒಲವೇ ?


ಹೊರಗೆ ಧೋ ಎಂದು ಮಳೆ ಸುರಿಯುತ್ತಿತ್ತು. ಬೆಂಗಳೂರು ಕಂಡ ಆ ವರ್ಷದ ಜೋರು ಮಳೆ ದಿನಗಳ್ಳಲ್ಲಿ ಅದೂ ಒಂದು.ನಾಳೆ ಅವಳ ಮದುವೆ. ಟೇಬಲ್ ಮೇಲೆ ಅವಳು ಬಂದು ಮಹೇಶನಿಗೆ ತಲುಪಿಸಿ ಹೋಗಿದ್ದ ಮುದ್ದಾದ ವಿವಾಹ ಆವ್ಹಾನ ಪತ್ರ.ಆಗ ರಾತ್ರಿಯ ೧೧:೪೫ ಗಂಟೆ,೨ ಕ್ವಾರ್ಟರ್ ರಂ ಕುಡಿದು ಮುಗಿಸಿ,ಮಹೇಶನಿಗೆ ಮೂರನೆಯದನ್ನು ತರಲು ಹೇಳಿದೆ. ಮಹೇಶ ಅಂದ "ಅಣ್ಣ, ತುಂಬ ಕುಡಿದಿದ್ದಿರ,ಮನೆಗೆ ಬೇರೆ ಹೋಗ ಬೇಕು ನೀವು,ಬೇಡ ಅಣ್ಣ" ಎಂದು ಗೋಗರೆದ.ಅದಕ್ಕೆ ನಾನು " "ಮಹೇಶ, ಯಾಕೋ ಇವತ್ತು ಅವಳ ನೆನಪು ತುಂಬ ಕಾಡುತ್ತಿದೆ, ಮರೆಯಲಾದರೂ ಕುಡಿಯಲೇ ಬೇಕು,ನೆನಪುಗಳನ್ನು ಅಳಿಸಿ ಹಾಕಲು ಸಮಯವೇ ಮದ್ದು,ಆ ಸಮಯವನ್ನು ಇದಿರು ಗೊಳ್ಳುತ್ತಾ ಕೂಡಲು ಇದೇ ಮದ್ದು,ತೆಗೆದು ಕೊಂಡು ಬಾ" ಎಂದೆ. ಮಹೇಶ ಇನ್ನೊಂದು ಕ್ವಾರ್ಟರ್ ತಂದು ಟೇಬಲ್ ಮೇಲೆ ಇಟ್ಟು ನನ್ನ ಮುಂದೆ ಕುಳಿತ.ಒಂದೊಂದೇ ಗುಟುಕು ಒಳಗೆ ಆದ ಹಾಗೆ ದುಖಃ ಉಮ್ಮಳಿಸಿ ಬಂದ ಅನುಭವ, ಹಳೆ ನೆನಪುಗಳು ಗೋಣಿಯ ಒಳಗಿಂದ ಹೊರ ಹರವಿಕೊಂಡು ಕೂತ ಅಜ್ಜಿಯ ಹಾಗೆ ನಾನು ಮಹೇಶನ ಮುಂದೆ ಕುಳಿತಿದ್ದೆ. ಸ್ನಾತಕೋತ್ತರ ಪದವಿಯಲ್ಲಿ ಅವಳು ನನ್ನ ಜೂನಿಯರ್,ಇಬ್ಬರು ಜೊತೆಗೂಡಿ ಒಂದೇ ಕಂಪನಿಗೆ ಪ್ರಾಜೆಕ್ಟ್ ಮಾಡುವಾಗ ಆದ ಗೆಳೆತನ, ನಮಗೆ ಅರಿವಿಲ್ಲದಂತೆ ಪ್ರೀತಿಗೆ ತಿರುಗಿತು. ನಾನು ದಿನವೂ ಫ್ರೆಂಚ್ ಕ್ಲಾಸ್ ಎಂದು ಮನೆಯಲ್ಲಿ ಸುಳ್ಳು ಹೇಳಿ ಅವಳೊಂದಿಗೆ ಕಳೆದ ಗಳಿಗೆಗಳು,ವೀಕೆಂಡ್ನಲ್ಲಿ ಸುತ್ತಿದ ಚಾಮುಂಡಿ ಬೆಟ್ಟ,ಕುಕ್ಕರಲ್ಲಿ ಕೆರೆ, ದಿನವೂ ಕೆಫೆ ಮಲ್ಲಿಗೆಯಲ್ಲಿ ತಿನ್ನುತಿದ್ದ ಬೆಳಗಿನ ತಿಂಡಿ,ಮೊದಲ ಬಾರಿ ಅವಳ ಅಪ್ಪ ಅಮ್ಮನನ್ನು ಭೇಟಿ ಮಾಡಿದಾಗ ಹೊಟ್ಟೆಯೊಳಗೆ ಹಾರಾಡಿದ ಚಿಟ್ಟೆಗಳು,ಮುಂಬೈನಿಂದ ವಾಪಸ್ಸು ಬಂದ ಮೇಲೆ ಅವಳನ್ನು ಕೊನೆ ಬಾರಿ ಬೇಟಿ ಮಾಡಿದ ಮಲ್ಲೇಶ್ವರದ ಕಾಫಿ ಡೇ,ಅವಳು ನನ್ನನು ಕಾರಣ ಹೇಳದೆ ತೊರೆದು ಹೋದ ಆ ಗಳಿಗೆ ಎಲ್ಲವು ಒಂದೇ ಸಾರಿ ಮನವನ್ನು ಹಿಂಡಿ ಹಿಪ್ಪೆ ಮಾಡಿತು.ಮನಸ್ಸಿನಲ್ಲಿ ಆದ ಆ ಗಾಯ ಮಾಸಲು ನಾನು ಕುಡಿಯುತಿದ್ದೆ,ಮಹೇಶ ೯೮.೩ ಹಚ್ಚಿ ಕೂತಿದ್ದ.ನಾಳೆ ನಾನು ಬೆಂಗಳೂರಿನಲ್ಲಿ ಇರಲ್ಲಾರೆ, ಇರ ಬಾರದು ಕೂಡ ಎಂದು ಕೊಳ್ಳುತಿರುವ ಆ ಕ್ಷಣದಲ್ಲೇ ಗಾಳಿಪಟದ ಆ ಹಾಡು ೯೮.೩ ನ ಲವ್ ಗುರು ಕಾರ್ಯಕ್ರಮದಲ್ಲಿ ಪ್ರೇಮಿಗಳಿಗಾಗಿ dedicate ಮಾಡಲ್ಪಡುತಿತ್ತು....

ಒಂದೆ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಣ್ಣಲಿ ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲ್ಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ ಮಳೆಬಿಲ್ಲಿನಂತೆ ನೋವು
ಕೊನೆ ಇರದ ಏಕಾಂತವೆ ಒಲವೆe
ಒಂದೇ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ


ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆ?
ಪ್ರಾಣ ಉಳಿಸುವ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ?
ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲ್ಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು , ಕಣ್ಣ ಹನಿ ಸುಮ್ಮನೆ ಒಳಗೆ , ಅವಳನ್ನೇ ಜಪಿಸುವುದೆ ಒಲವೇ ?
ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆ?
ಪ್ರಾಣ ಉಳಿಸುವ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ?

ನಾಲ್ಕು ಪದದ ಗೀತೆಯಲ್ಲಿ ಮಿಡಿತಗಳ ಬಣ್ಣಿಸಬಹುದೇ?
ಮೂರು ಸ್ವರದ ಹಾಡಿನಲ್ಲಿ ಮಿಡಿತಗಳ ಬಣ್ಣಿಸಬಹುದೆ?
ಉಕ್ಕಿ ಬರುವ ಕಂಠದಲ್ಲಿ ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೇ ?
ಹಾಡು ಮುಗಿಯುವ ಹೊತ್ತಿಗೆ ನನ್ನ ಕಣ್ಣುಗಳು ಒದ್ದೆಯಾದವು, ಹೊರಗೆ ಮಳೆಯೂ ನನ್ನ ನೋವಿನಲ್ಲಿ ಪಾಲು ಪಡೆದು ಇನ್ನು ಜೋರಾಗಿ ಬೀಳಲು ಪ್ರಾರಂಬಿಸ್ಸಿತ್ತು .

No comments: