Wednesday, September 3, 2008

ಮೈಸೂರು ಎಂದರೆ....

ಮೈಸೂರಿನ ಸೊಗಡನ್ನು ಅನುಭವಿಸಬೇಕೆಂದರೆ ಅದು ರಜಾದಿನಗಳಲ್ಲಿ ಅಥವಾ ಶನಿವಾರ/ಭಾನುವಾರಗಳ್ಳಲ್ಲಿ ಆಗದು, ಅನ್ಯಥ ಭಾವಿಸಬೇಡಿ. ಮೈಸುರಿನಲ್ಲೇ ಹುಟ್ಟಿ, ಬೆಳೆದು, ಓದಿ ಸುಮಾರು ೨೯ ವರ್ಷಗಳ ಜೀವ ಸವೆಸಿರುವ ನನಗೆ ನಿಜವಾದ ಮೈಸೂರು ಅನುಭವಿಸಬೇಕಾದರೆ ನೀವು ಮರದ ಸುತ್ತ ಹಬ್ಬಿ ಬೆಳೆವ ಸಣ್ಣ ಬಳ್ಳಿಯ ಹಾಗೆ ಮೈಸೂರಿನಲ್ಲಿ ನೆಲೆಸಿ, ಮೈಸೂರಿನ ಜೊತೆ ಬೆಳೆದರೆ ಮಾತ್ರ ಮೈಸೂರಿನ ನಿಜವಾದ ಸೊಗಡು ಅನುಭವಿಸಲು ಸಾಧ್ಯ.

ನೀವು ಸಂಜೆ WALK ಹೋದಾಗ , ನಿಮ್ಮ ಮನೆಯ ರಸ್ತೆ ಮೂಲೆಯಲ್ಲಿರುವ ರಾಮ ಮಂದಿರದ ಅರ್ಚಕರು ನಿಂತು ನಿಮ್ಮ ಜೊತೆ ಉಭಯ ಕುಶಲೋಪರಿ ಮಾತನಾಡಿ, ನಾಳೆ ಬೆಳಿಗ್ಗೆ ಇರುವ ಪೂಜೆಯ ಬಗ್ಗೆ ಹೇಳಿ ಪ್ರಸಾದ ವಿನಿಯೋಗಿಸಿ ಹರಸಿದಾಗ ಅವರಲ್ಲಿ ಪ್ರೀತಿಯಲ್ಲಿ ಮೈಸೂರನ್ನು ಕಾಣುವಿರಿ. ಹೀಗೆ ಮುಂದೆ ಸಾಗುವಾಗ ಮುಖ್ಯ ರಸ್ತೆಯಲ್ಲಿರುವ ಪುಸ್ತಕದ ಅಂಗಡಿಯವರು "ಕಸ್ತೂರಿ" ಅಥವಾ "ಮಯೂರ" ದ ಇತ್ತೀಚಿನ ಆವೃತ್ತಿ ನಾಳೆ ಬರುವುದಾಗಿ ಜ್ಞಾಪಿಸಿ , ನಾಳೆ ನೀವು ಸಿಕ್ಕಾಗ ನಿಮಗಾಗಿ ಒಂದು ಪ್ರತಿ ಕೊಡುವ ಭಾವದಲ್ಲಿ ಮೈಸೂರನ್ನು ಕಾಣುವಿರಿ. ಮುಂಜಾನೆ ನಿಮ್ಮ ಮನೆಯ ಹಾಲು ಸರಬರಾಜು ಮಾಡುವ ಹುಡುಗ ನಿಮ್ಮ ಬರುವಿಕೆಯನ್ನು ಮುಂಚೆಯೇ ಗ್ರಹಿಸಿ ೧/೨ ಲೀಟರ್ ಹಾಲು ಜಾಸ್ತಿ ಕೊಟ್ಟು ಹೋದ ಆದರದಲ್ಲಿ ಮೈಸೂರನ್ನು ಕಾಣುವಿರಿ. ಪಕ್ಕದ ಮನೆಯ ಆಂಟಿ ಬಿಸಿ ಬೋಂಡ ಮಾಡಿ, ನಿಮ್ಮನ್ನು ನಿಮ್ಮ ಚಿಕ್ಕಂದಿನ ಹೆಸರಿಡಿದು ಕರೆದು ಕೊಡಮಾಡುವ ಅಕ್ಕರೆಯಲ್ಲಿ ಮೈಸೂರನ್ನು ಕಾಣುವಿರಿ. ಪಕ್ಕದ ಮನೆಯ ಸುಜಾತ ಟೀಚರ್ ಮನೆಗೆ ಪಾಠಕ್ಕೆ ಬರುವ ಚಿಣ್ಣರನ್ನು ಕಂಡು ನಿಮ್ಮ ಬಾಲ್ಯದ ನೆನೆಪನ್ನು ನೆನೆವ ಕ್ಷಣದಲ್ಲಿ ಮೈಸೂರನ್ನು ಕಾಣುವಿರಿ. ಕುಕ್ಕರಳ್ಳಿ ಕೆರೆಯ ಸುತ್ತ ಒಂದು ಸುತ್ತು ಹೊಡೆದು ಗುಲಗಂಜಿ ಬೀಜ ಹೆಕ್ಕಿ ಜೇಬು ತುಂಬಿಕೊಂಡ ಗಳಿಗೆಯಲ್ಲಿ ಮೈಸೂರನ್ನು ಕಾಣುವಿರಿ. ಚಾಮುಂಡಿ ಎಕ್ಸ್ಪ್ರೆಸ್ ರೈಲು ಹೊರಟಾಗ ,ಮೊದಲ ಬಾರಿ ಬೆಂಗಳೂರಿಗೆ ಹೊರಟ ಮದುವೆಯಾದ ಮದುಮಗಳ ತಾಯಿಯ ಬೀಳ್ಕೊಡುಗೆಯ ಕಂಬನಿಯಲ್ಲಿ ಮೈಸೂರನ್ನು ಕಾಣುವಿರಿ.ಸಿಟಿ ಬಸ್ಸಲ್ಲಿ ಸಿಕ್ಕ ಹಳೆಯ ಗೆಳೆಯ ತನ್ನ ತಂಗಿಯ ಮದುವೆಯ ಆಮಂತ್ರಣ ಬಸ್ಸಲ್ಲಿ ಕೊಟ್ಟಾಗ ಇರುವ ಗೆಳೆತನದಲ್ಲಿ ಮೈಸೂರನ್ನು ಕಾಣುವಿರಿ. ಚೆಲುವಾಂಬ ಉದ್ಯಾನವನದ ಬೆಂಚಿನ ಮೇಲೆ ಕುಳಿತು, ಸುತ್ತಲು ಇರುವ ಹೂವುಗಳ ಅಂದ ಸವಿಯುತ್ತ ತಿಂದ ಹುರಿದ ಕಡ್ಲೆಕಾಯಿಯಲ್ಲಿ ಮೈಸೂರನ್ನು ಕಾಣುವಿರಿ. ಕಾಲೇಜಿಗೆ ಬಂದಾಗ ತರಗತಿಗಳನ್ನು ಬಂಕ್ ಮಾಡಿ ವುಡ್ ಲಾಂದ್ಸ್ ಥಿಯೇಟರ್ನಲ್ಲಿ ಕದ್ದು ಮುಚ್ಚಿ ನೋಡಿದ ಶಾರುಖ್ ಖಾನ್ ನಟಿಸಿದ "ಬಾಜಿಗರ" ಚಿತ್ರವೋ, ಅಥವಾ ರಾಜ ಕಮಲ್ / ಸ್ಟರ್ಲಿಂಗ್ ಥಿಯೇಟರ್ನಲ್ಲಿ ರಾತ್ರಿಯ ಎರಡನೇ ಪ್ರದರ್ಶನದಲ್ಲಿ ನೋಡಿದ ಜೇಮ್ಸ್ ಬಾಂಡ್ ಚಿತ್ರವೋ ನೆನಪಿಗೆ ಬಂದಾಗ, ಆ ನೆನಪಿನಲ್ಲಿ ಮೈಸೂರನ್ನು ಕಾಣುವಿರಿ. ಶಾರದ ವಿಳಾಸ ಕಾಲೇಜಿನ ಜನರಲ್ ಸ್ಟುಡೆಂಟ್ ಬಾಡಿ ಎಲೆಕ್ಷನ್ ವೇಳೆ ನಡೆಯುವ ಹೊಡೆದಾಟದಲ್ಲಿ ಮೈಸೂರನ್ನು ಕಾಣುವಿರಿ. NIE-SJCE ಹುಡುಗರ ನಡುವೆ ಆಗುವ ದೈವಾಸುರ ಕ್ರಿಕೆಟ್ ಕಾಳಗದಲ್ಲಿ ಮೈಸೂರನ್ನು ಕಾಣುವಿರಿ. ನಂಜು ಮಳಿಗೆ ಯಲ್ಲಿ ಇಮಾಂ ಸಾಬಿಯ ಅಂಗಡಿಯಲ್ಲಿ ಕೊಂಡು ಪಟದ ಹಬ್ಬದ ದಿನ ಹಾರಿಸಿದ ಪಟ ದೂರವಾಣಿ ಕಂಬಕ್ಕೆ ಸಿಕ್ಕಿ ಹರಿದಾಗ ಆದ ನಿರಾಸೆಯಲ್ಲಿ ಮೈಸೂರನ್ನು ಕಾಣುವಿರಿ. RTO ಸರ್ಕಲ್ ಹತ್ತಿರ ಇರುವ ನಾಯ್ಡು ಅಂಗಡಿಯಲ್ಲಿ ಕುಡಿದ ದ್ರಾಕ್ಷಿ ರಸ ಮತ್ತು ಒಡೆದ ದಮ್ಮಿನಲ್ಲಿ ಮೈಸೂರನ್ನು ಕಾಣುವಿರಿ. GTR ನಲ್ಲಿ ತಿಂದ ಮಸಾಲೆ ದೋಸೆ ಮತ್ತು ಕುಡಿದ ಕಾಫೀಯ ಸ್ವಾದದಲ್ಲಿ ಮೈಸೂರನ್ನು ಕಾಣುವಿರಿ. ಮೈಲಾರಿ ಹೋಟೆಲಿನ ಬಿರ್ಯಾನಿಯ ಸ್ವಾದದಲ್ಲಿ ಮೈಸೂರನ್ನು ಕಾಣುವಿರಿ.

ಮೈಸೂರು ಎಂದರೆ ನಾನು ಬೆಳೆದ ಮೈಸೂರು, ನನ್ನ ಮೈಸೂರು , GRS ಬರುವ ಮುಂಚೆ ಇದ್ದ ಮೈಸೂರು, ರಸ್ತೆ ಇಕ್ಕೆಲಗಳನ್ನು ಕೊರೆದು ಕೆಳಸೇತುವೆ/ ಮೇಲ್ಸೆತುವಗಳನ್ನೂ ಮಾಡುವ ಮುಚೆ ಇದ್ದ ಮೈಸೂರು, Iನ್ಫಾಸ್ಯ್ಸ್ ಮೈಸೂರಿಗೆ ಬರುವ ಮುಂಚೆ ಇದ್ದ ಮೈಸೂರು, ವರ್ತುಲ ರಸ್ತೆ ಆಗುವ ಮುಂಚೆ ಇದ್ದ ಮೈಸೂರಿನಲ್ಲಿ ಬೆಳೆದವರು ನನ್ನ ಈ ಭಾವನೆಗಳಿಗೆ ಸ್ಪಂದಿಸಬಲ್ಲರೆನೋ? ಮೈಸೂರಿಗೆ ತಂತ್ರಾಂಶ ವಿಜ್ಞಾನದ ೩ ತಿಂಗಳು ತರಬೇತಿಗೆ ಬಂದೋ, ಅಥವಾ ಯಾವುದೊ ಕಾಲೇಜಿನ ಕೋರ್ಸ್ ಮಾಡಲು ಬಂದೋ, ಕೆಫೆ ಕಾಫೀ ಡೇ ಕಾಫೀ, ಪಿಜ್ಜಾ ಕಾರ್ನರ್ ಪಿಜ್ಜಾ ತಿನ್ನುವುದನ್ನೇ ಚಿಲ್ಲಿಂಗ್ ಔಟ್ ಇನ್ ಮೈಸೂರು ಎಂತಲೋ ಇರುವರಿಗೆ, ನನ್ನ ಹೃದಯದಲ್ಲಿರುವ ಭಾವಗಳು ಅರ್ಥವಾಗುವುದೇ???