Tuesday, February 26, 2008

ಅಲೆಮಾರಿಯ ಮೊದಲ ನೆನಪು

ಮದುವೆಯಾಗಿ ಮನೆ ಮಾಡಿದ ಮೇಲೆ ಆಫೀಸಿಗೆ ಕಂಪನಿ ಕ್ಯಾಬ್ನಲ್ಲಿಯೇ ಬರುವ ಅಬ್ಯಾಸವನ್ನು ರೂಡಿಸಿ ಕೊಂಡಿದೆನೆ. ಹೀಗೆ ಆಫೀಸಿಗೆ ಬರುವ ದಿನ, ಕಿಟಕಿ ಗಾಜನ್ನು ಕೆಳಗೆ ಇಳಿಸಿ, ರಸ್ತೆಯಲ್ಲಿ ಇರುವ ವಾಹಗಳನ್ನು, ಜನಗಳ್ಳನ್ನು ನೋಡುವುದು ಒಂದು ಹವ್ಯಾಸವೇ ಆಗಿ ಹೋಗಿದೆ. ಆ ಹವ್ಯಾಸವು ಒಂದು ಹೆಜ್ಜೆ ಮುಂದೆ ಹೋಗಿ, ಹೀಗೆ ಆ ವಾಹನಗಳು, ಅದರೊಳಿರುವ ಜನರು ಏನು ಯೋಚಿಸುತಿರಬಹುದು, ಅವರ ಹಾವ ಭಾವಗಳನ್ನು ನೋಡುತ್ತ ಮನಸಿನಲ್ಲೇ ಕಥೆ ಕಟ್ಟುವುದು ಹೀಗೆ ಪ್ರಿಯವಾದ ಹವ್ಯಾಸವಾಗಿ ಮಾರ್ಪಟ್ಟಿದೆ.

ಇವತ್ತು ಬೆಳಿಗ್ಗೆ ಆಫೀಸಿಗೆ ಬರುವಾಗ, ಹಾಗೆ ಮೈಸೂರು, ನನ್ನ ಬಾಲ್ಯ, ಅಜ್ಜಿ-ಅಜ್ಜನ ಮನೆಯಲ್ಲಿ ನಾನು ಒಂದನೇ ತರಗತಿಯಿಂದ ನನ್ನ ತಾಂತ್ರಿಕ ಶಿಕ್ಷಣ ಮುಗಿಸಿ, ವ್ಯವಹಾರ ನಿರ್ವಹಣದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಕೆಲಸ ಪಡೆದು ಬೆಂಗಳೂರಿಗೆ ಬಂದು, ನೆಲೆ ನಿಂತು, ಮದುವೆಯಾಗಿ ಕೆಳೆದ ಈ ದಿನದ ವರೆಗೂ ಪ್ರಮುಖವಾಗಿ ಏನನ್ನು ಮಾಡದೆ, ಮೈಸೂರಿನ ಬೀದಿಗಳಲ್ಲಿ ನರೇಶನ ಜೊತೆಗೂಡಿ ಸುತ್ತಿದ ಆ ದಿನಗಳು ನೆನಪಿಗೆ ಬಂದವು. ಆ ದಿನಚರಿಯಲ್ಲಿ ಊಟ,ನಿದ್ದೆ, ತಿರುಗಾಟ ಬಿಟ್ಟರೆ ಏನಕ್ಕೂ ಜಾಗವಿರಲಿಲ್ಲ. ಬೆಳಿಗ್ಗೆ ಅಜ್ಜನ ತಿಂಡಿ(ಅಂದರೆ ಸುಮಾರು ೧೦ ಗಂಟೆ) ಮುಗಿಯುವ ಹೊತ್ತಿಗೆ ಎದ್ದು, ಸ್ನಾನ ಮುಗಿಸಿ,ತಿಂಡಿ ತಿಂದು, ನರೇಶನ ಜೊತೆಗೂಡಿ ಬೈಕೇರಿ ಹೊರಟರೆ, ಕಾಳಿದಾಸ ರಸ್ತೆ ದಾಟಿ, ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಮುಂದಣ ರಸ್ತೆ ದಾಟಿ ಮುಂದೆ ಹೋದರೆ ಬರಿ ಬಟಾ ಬಯಲು.ವಿಜಯನಗರ ಬಡಾವಣೆ ರೂಪುಗೊಂಡು ಆಕಾರ ಪಡೆದ ದಿನಗಳವು, ಸೈಟ್ ಕೊಂಡು ಬೇಲಿ ಹಾಕಿಸಿಕೊಂಡ ಒಂದು ಶ್ರೀಮಂತ ಕುಟುಂಬ,ಸ್ಯೆಟನ್ನು ನೋಡಿಕೊಳ್ಳಲು ಇರಲಿ ಎಂದು ಒಬ್ಬ ಸೆಕ್ಯುರಿಟಿ ಗಾರ್ಡ್ ಅನ್ನು ನೇಮಿಸಿದ್ದರು. ಅವನು ತನ್ನ ಕುಟುಂಬ ಸಮೇತನಾಗಿ ಸೈಟಿನ ಒಂದು ಮೂಲೆಯಲ್ಲಿ ಒಂದು ಗುಡಿಸಲು ಹಾಕಿ ಅದರ ಮುಂದೆ ಒಂದು ಪೆಟ್ಟಿಗೆ ಇಟ್ಟು ಒಂದು ಅಂಗಡಿಯನ್ನು ಪ್ರಾರಂಬಿಸಿದ ದಿನಗಳವು.

ನನಗೆ ಮೈಸೂರಿನ ರಸ್ತೆಗಳನ್ನು ಸುತ್ತಿ ಸುಸ್ತು ನಿವಾರಿಸಿಕೊಳ್ಳಲು ಒಂದು ಜಾಗ ಸಿಕ್ಕ ಹಾಗಾಯಿತು, ಅದಕಿಂಥ ಮಿಗಿಲಾಗಿ ನನಗೋ ದಮ್ಮು ಹೊಡೆಯಲು ಹೇಳಿ ಮಾಡಿಸಿದಂಥ ಜಾಗ,ಒಂದು ಚೋಟ ಟೀ, ಎರಡು ಮಸಲೆವಡೆ, ೨ ಕಿಂಗ್ ಸಿಗರೇಟು ಇವೆಲ್ಲವನ್ನು ನಾನು ಮುಗಿಸಲು ತೆಗೆದು ಕೊಳ್ಳುತಿದ್ದ ಸಮಯ ಬರೋಬರ್ರಿ ೩ ಗಂಟೆಗಳ ಸಮಯ. ನರೇಶ ದಿಪ್ಲೋಮಾದ ಮೊದಲ ವರ್ಷದಲ್ಲಿ ೨ ವಿಷಯದಲ್ಲಿ ಅನುತೀರ್ಣನಾಗಿ ಮನೆಯಲ್ಲಿ ಕಾಲ ಕಳೆಯುತಿದ್ದ, ನನಗೋ ನನ್ನ ತಾಂತ್ರಿಕ ಶಿಕ್ಷಣ ಮುಗಿಸಿ, ಒಂದು ಕಂಪನಿಯಲ್ಲಿ ಕೆಲಸ ಮಾಡಿ, ಅದನ್ನು ತೊರೆದು, ಮುಂದಕ್ಕೆ ಓದುವುದಕ್ಕೆ ಪರೀಕ್ಷೆ ತಯಾರಿ ನಡೆಸುವ ನೆಪದಲ್ಲಿ ಸುಮ್ಮನೆ ಸುತ್ತುವ ಹಂಬಲ. ಹೀಗೆ ತಿರುಗಾಡುತಿದ್ದ ದಿನಗಳಲ್ಲಿ ನಾವು ನಮಗಾಗಿ ಮಾಡಿಕೊಂಡ ಒಂದು ಅಡ್ಡ. ನೆನಪಿನ ಬಾನಂಗಳದಿಂದ ಹೊರ ಬಂದು ನರೇಶನಿಗೆ ಕರೆ ಮಾಡಿದೆ, ಅವನೋ ಡಿಸೈನ್ ಲೆಬೊರೇಟರಿಯಲ್ಲಿ ಕೂತು ಏನನ್ನೊ ಮಾಡುತಲಿದ್ದ, ಹಿಂಬದಿಯಲ್ಲಿ ಯಂತ್ರಗಳ ಶಬ್ಧ, ಅವನ ಕಂಪ್ಯೂಟರ್ನ ಮಧ್ಯ ಅವನ ಧ್ವನಿಯು ಬಾಸವಗುತಿತ್ತು . ಹೀಗೆ ನೆನಪಿನ ದೋಣಿಯಲ್ಲಿ ಸಾಗಿ ಇಬ್ಬರು ಆ ಜಾಗದ ಬಗ್ಗೆ ವಿಚಾರ ಮಾಡುತ್ತಿರುವಾಗ, ನರೇಶ್ ಹೇಳಿದ ಮಾತು ಮನಸನ್ನು ನಾಟಿತು - ಮಗ, ಆ ಸೆಕ್ಯುರಿಟಿ ಗಾರ್ಡ್ ಮತ್ತು ಅವನ ಕುಟುಂಬ ನಂಜನಗೂದಿಗೆ ಹೋಗಿ ಬರುವಾಗ ರಸ್ತೆ ಅಪಘಾತವಾಗಿ ನಿರ್ನಾಮವಾದ ವಾಸ್ತವ, ಬದುಕಲ್ಲಿ ಏನು ಗುರಿ ಇಲ್ಲದ ಆ ದಿನಗಳಲ್ಲಿ ನಾವು ಕಾಲ ಕಳೆದ ಆ ಪೆಟ್ಟಿಗೆ ಅಂಗಡಿ, ಆ ಅಜ್ಜ ಮಾಡಿ ಕೊಟ್ಟ ಮಸಾಲೆ ವಡೆ, ಚಹಾ, ಅವನ ಮೊಮ್ಮಗಳು ಆಡುತಿದ್ದ ಟೀಚರ್ ಆಟ ಎಲ್ಲ್ವ ಮನಸ್ಸಿನ ಪರದೆಯ ಮೇಲೆ ಇನ್ನು ಹಾಗೆ ಉಳಿದಿದೆ. ಪಕ್ಕದ ಕಾರಿನ ಎಫ್. ಎಂ ರೇಡಿಯೋದಲ್ಲಿ -- ಆಡಿಸಿ ನೋಡು ಬೀಳಿಸಿ ನೋಡು ಹಾಡು ಬರುತಿತ್ತು. ಅದು ಈ ಘಟನೆಗೆ ಹೊಂದಬಹುದೇನೋ ಅಲ್ಲವೇ ?