ಸುಮಾರು ೧೨-೧೩ ವರುಷಗಳ ಹಿಂದಿನ ಮಾತು. ನಾನು ಪುತ್ತೂರು ಸಮೀಪದ ಒಂದು ಹುಡುಗರ ವಸತಿ-ಶಾಲೆಯಲ್ಲಿ ಒಂದನೇ ಪಿ.ಯು.ಸಿ ಓದುತ್ತಿದ್ದೆ. ತರಗತಿಯ ಸುಮಾರು ೬೦ ಹುಡುಗರನ್ನು ೧೫ ರೂಮಿನಲ್ಲಿ, ಒಂದು ರೂಮಿಗೆ ೪ ಹುಡುಗರ ಹಾಗೆ ವಿಂಗಡಿಸಿ ವಸತಿ ಕಲ್ಪಿಸಿದ್ದರು. ನನ್ನ ರೂಮಿನಲ್ಲಿ ನಾನು, ರಾಜಣ್ಣ, ನಿತಿನ, ಬಾಲಿ ಆಲಿಯಾಸ್ ಬಾಲಚಂದ್ರ ಇದ್ದೆವು. ಕಡಲು ಸೀಮೆಯ ಮಳೆಗಾಲ, ದೋ ಎಂದು ಮಳೆ ಸುರು ಆದರೆ, ಮಳೆಗಾಲ ಮುಗಿಯುವವರೆಗೂ ದಿನಂಪ್ರತಿ ಮಳೆ ಬೀಳುತ್ತಲೇ ಇರುತ್ತದೆ. ಹೀಗಿರುವಾಗ, ದಿನಂಪ್ರತಿ ಕಾಲೇಜು ಮುಗಿದ ಮೇಲೆ, ಮೆಸ್ಸಿನಲ್ಲಿ ತಿಂಡಿ-ಕಾಫಿ ಮುಗಿಸಿ, ಕೋಣೆಯಲ್ಲೇ ಇದ್ದು ಪಾಠಗಳನ್ನು ಓದಿಕೊಳ್ಳುವುದೋ, ಬಟ್ಟೆ ಒಗೆಯುವುದೋ, ಲ್ಯಾಬು-ರೆಕಾರ್ಡು ಬರೆದು ಮುಗಿಸುವುದೋ, ಇಲ್ಲ ಸುಮ್ಮನೆ ಹರಟೆ ಹೊಡೆಯುತ್ತ ಕೂರುವುದೋ, ಮಾಡುತ್ತಾ ಕೂರುತ್ತಿದ್ದೆವು. ನಮ್ಮ ಕೋಣೆಯ ಹೊರಗೆ ಒಂದು ಸಣ್ಣ ಗುಡ್ಡ, ಆ ಗುಡ್ಡದ ಒಂದು ಕಡೆ ವಸತಿ-ಶಾಲೆಗೇ ಸೇರಿದ ಬಾಳೆಹಣ್ಣಿನ ತೋಟ, ಇನ್ನೊಂದು ಕಡೆ ನಮ್ಮ ಪ್ರಾರ್ಥನಾ ಮಂದಿರವು ಇತ್ತು. ದಿನವು ನಾವು ಹೀಗೆ ಓದುವ ಸಮಯ ಅಂದರೆ ಸಂಜೆಯ ಸುಮಾರು ೬:೩೦ - ೮:೦೦ ಗಂಟೆಯ ಸಮಯದಲ್ಲಿ ಎರಡು ಸಾರಿ ನಮ್ಮ ವಾರ್ಡೆನ್ನು ಬಂದು, ಹುಡುಗರು ಓದುತ್ತಿದಾರೂ, ಇಲ್ಲವೇ ಸುಮ್ಮನೆ ಕಾಲಹರಣ ಮಾಡುತ್ತಿದರೋ ಎಂದು ನೋಡಿ ಹೋಗುವುದು ವಾಡಿಕೆ. ನಮ್ಮ ವಾರ್ಡೆನ್ನಿಗೆ ಒಂದು ಕಾಲು ಊನವಾದ ಕಾರಣ, ಅವರು ಚಪ್ಪಲಿ ಕಾಲಿನಲ್ಲಿ ನಡೆಯುವಾಗ ಚರ-ಚರ ಎಂದು ಸದ್ದು ಬರುತ್ತಿತ್ತು. ಹೀಗಾಗಿ, ನಾವು ಬೇರೆ ಕೆಲಸದಲ್ಲಿ ಮಗ್ನರಾಗಿದ್ದರೂ, ವಾರ್ಡೆನ್ನು ಬರುವ ಸದ್ದು ಕೇಳಿ, ಬೇರೆ ಕೆಲಸಗಳನ್ನು ನಿಲ್ಲಿಸಿ ಪುಸ್ತಕ ಹಿಡಿದು ಕೂರುತ್ತಿದ್ದೆವು. ಹೀಗೆ ಒಂದು ದಿನ ಸಸ್ಯಶಾಸ್ತ್ರದಲ್ಲಿ ಬಾಳೆ ಹೂವಿನ ಬಗ್ಗೆ ಓದುತಿದ್ದ ಹಾಗೆ, ಬಾಳಿ - "ಮಗ, ಇಲ್ಲೇ ತೋಟದಲ್ಲಿ ಒಂದು ಬಾಳೆ ಹೂವು ತಂದರೆ ಇನ್ನು ವಿವರವಾಗಿ ಅಭ್ಯಾಸ ಮಾಡಬಹುದು" ಎಂದ. ಅಲ್ಲೇ ಇದ್ದ ರಾಜಣ್ಣ ನಿಧಾನವಾಗಿ ಎದ್ದು ಹೋಗಿ, ಒಂದು ಬಾಳೆ ಹೂವನ್ನು ತರುವ ಬದಲು ಒಂದು ಬಾಳೆ ಹಣ್ಣಿನ ಗೊನೆಯನ್ನೇ ಕೊಯ್ದು, ತನ್ನ ತವಲಿನಲ್ಲಿ ಮುಚ್ಚಿ ತಂದು, ಸ್ನಾನದ ಬಕೆಟ್ಟಿನಲ್ಲಿ ಮುಚ್ಚಿ ಬಚ್ಚಿಟ್ಟ. ನಮ್ಮೆಲ್ಲರಿಗೂ ಒಂದು ಕಡೆ ಬಾಳೆಹಣ್ಣಿನ ಹೂವು ಸಿಕ್ಕ ಖುಷಿಯಾದರೆ, ಅದರ ಜೊತೆ ಸಿಕ್ಕ ಹಣ್ಣು ಮತ್ತು ಅದು ನಮಗೆ ತರುವ ಅಪಾಯದ ಬಗ್ಗೆ ದಿಗಿಲಾಯಿತು. ಅದಕ್ಕಿಂತ ಮಿಗಿಲಾಗಿ ಅದು ಮೈಲಾರಿಯ ಕಣ್ಣಿಗೆ ಬಿದ್ದು , ಅವನು ಅದರ ಬಗ್ಗೆ ಹೋಗಿ ವಾರ್ದನ್ನಿನ್ನ ಕಿವಿ ಕಚ್ಚಿದರೆ ನಮ್ಮ ಕಥೆ ನಾಯಿಗಿಂತ ಕಡೆ ಆಗುವುದರಲ್ಲಿ ಎರಡು ಮಾತಿಲ್ಲ. ಆ ಕಾರಣದಿಂದ ರೂಮಿನಲ್ಲಿ ಇರುವ ಹೂತ್ತು ಮೈಲಾರಿಯ ಕಣ್ಣು ಹಣ್ಣಿನ ಮೇಲೆ ಬೀಳದ ಹಾಗೆ ನೋಡಿ ಕೊಳ್ಳುವ ಹೊಣೆಯನ್ನು ನಾನು, ಬಾಲಿ, ರಾಜಣ್ಣ ಹೊತ್ತು ಕೊಂಡೆವು. ನಿತಿನ ಹತ್ತಿರ ಒಂದು ಕಬ್ಬಿಣದ ಖಾಲಿ ಟ್ರಂಕು ಇತ್ತು, ಹಣ್ಣಿನ ಗೊನೆಯನ್ನು ಅದರಲ್ಲಿ ಜೋಪಾನವಾಗಿ ಇಟ್ಟೆವು, ಅದನ್ನು ನಾವು ನಾಲ್ಕು ಜನ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದೆವು. ದಿನವು ಊಟ ಮುಗಿದ ಮೇಲೆ ರೂಮಿಗೆ ಬಂದು, ನಾನು, ಬಾಲಿ, ನಿತಿನ, ರಾಜಣ್ಣ ೩-೪ ಬಾಳೆಹಣ್ಣನ್ನು ತಿನ್ನುತ್ತಿದೆವು. ಮೈಲಾರಿ ನಮ್ಮ ರೂಮಿನಲ್ಲಿ ಇರುವ ಹೊತ್ತು, ಗಂಧದಕಡ್ಡಿ ಹೊತ್ತಿಸಿ ಅವನ ನಾಯಿ ಮೂಗಿಗೆ ನಿತಿನನ ಟ್ರಂಕಿನಲ್ಲಿ ಇದ್ದ ಹಣ್ಣಿನ ವಾಸನೆ ಹತ್ತದ ಹಾಗೆ ನೋಡಿಕೊಳ್ಳುತ್ತಿದೆವು.
ಹೀಗೆ ಒಂದು ದಿನ, ನಾವು ನಾಲ್ಕು ಜನ, ಬೇಗ ರಾತ್ರಿಯ ಊಟ ಮುಗಿಸಿ, ರೂಮಿಗೆ ಬಂದೆವು. ಅವತ್ತಿನ ಊಟಕ್ಕೆ ಕೂಡ ಅದೇ ಅನ್ನ್ಹ , ಸಾರು, ಮೊಸರು, ಉಪ್ಪಿನಕಾಯಿ ತಿಂದು, ಬಾಳೆಹಣ್ಣು ತಿನ್ನುವ ತವಕದಲ್ಲಿ ಬಂದು, ನಿತಿನನ ಟ್ರಂಕು ತೆರೆದು, ಬಾಳೆಹಣ್ಣಿನ ಗೊನೆಯನ್ನು ಆಚೆ ತೆಗೆದು, ಗೊನೆಯಲ್ಲಿರುವ ಹಣ್ಣಿನ ಲೆಕ್ಕ ಹಾಕಿ - ಒಟ್ಟು ೧೬ ಬಾಲೆ ಹಣ್ಣು ಬಾಕಿ ಇರುವ ಗ್ಯಾರಂಟಿ ಮಾಡಿಕೊಂಡು ಇನ್ನೆನ್ನು ಎಲ್ಲರೂ ಬಾಲೆ ಹಣ್ಣು ತಿನ್ನಬೇಕು ಎನ್ನುವಾಗ, ರೂಮಿನ ಹೊರಗೆ ಚರ-ಚರ ಸದ್ದು ಕೇಳಿ ಬಂತು.ಒಮ್ಮೆಗೆ ಹೃದಯ ಬಾಯಿಂದ ನೆಲದ ಮೇಲೆ ಬಿದ್ದ ಹಾಗೆ ಹಾಗಾಯಿತು. ಎಲ್ಲರಿಗು ವಾರ್ದೇನು ರೂಮಿನ ಒಳಗೆ ಬಂದು ಬಾಳೆಹಣ್ಣಿನ ಜೊತೆಯಲ್ಲಿ ನಮ್ಮನ್ನು ಕಂಡರೆ ನಮ್ಮೆಲ್ಲರ ತಿಥಿ ಕಟ್ಟಿಟ್ಟ ಬುತ್ತಿ. ಹಣ್ಣನ್ನು ಟ್ರಂಕು ಸೇರಿಸುವ ಮೊದಲು, ನಮ್ಮಲ್ಲಿ ಯಾರಾದರು ವಾರ್ದನ್ನನ್ನು ರೂಮಿನ ಹೊರಗೆ ತಡೆ ಹಿಡಿಯಬೇಕು, ಅದಕ್ಕೆ ರಾಜಣ್ಣ - "ಮಕ್ಳ , ನಾನು ಕುಂತ ರೂಮಿನ ಹೊರಗೆ ತಡೆ ಹಿಡಿಯುತ್ತೇನೆ, ನೀವೆಲ್ಲ ಹಣ್ಣನ್ನು ಟ್ರಂಕು ಸೇರಿಸಿ " ಎಂದು ರೂಮಿನ ಹೊರಗೆ ಹೋದ. ನಾವೆಲ್ಲಾ ಲಗುಬಗನೆ ಹಣ್ಣನ್ನು ನಿತಿನನ ಟ್ರಂಕು ಸೇರಿಸಿ ರೂಮಿನ ಆಚೆ ಬಂದು ನೋಡಿದರೆ , ಮೈಲಾರಿಗೂ ರಾಜಣ್ಣನಿಗೂ ಕೈ-ಕೈ ಮಿಲಾಯಿಸುವ ಸನ್ನಿವೇಶ ಏರ್ಪಟ್ಟಿತ್ತು. ಮೈಲಾರಿ ಹೊಟ್ಟೆ ತುಂಬಾ ಉಂಡು, ತನ್ನ ಚಪ್ಪಲಿಯನ್ನು ಚರ-ಚರ ಎಂದು ಸದ್ದು ಮಾಡುತ್ತಾ ನಮ್ಮ ಹಾಸ್ಟೆಲ್ಲಿನಲ್ಲಿ ಇರುವ ರೂಮಿನ ಹುಡುಗರಿಗೆ ಹೆದರಿಸುತ್ತ ಮಜಾ ತೆಗೆದು ಕೊಳ್ಳುತ್ತಾ ನಮ್ಮ ರೂಮಿನ ಹೊರಗೆ ಬರುವ ಹೊತ್ತಿಗೆ,ರಾಜಣ್ಣ ಅದು ವಾರ್ದೆನ್ನು ಅಲ್ಲ, ಅವರ ಚಮಚ ಮೈಲಾರಿ ಎಂದು ಅರಿವಾಗಿ ಅವನಿಗೆ - "ಮಗನೆ, ಏನು ಮೆಸ್ಸಿನ್ನಲ್ಲಿ ತಿಂದ ಊಟ ಜಾಸ್ತಿ ಆಯಿತಾ, ಎಲ್ಲರಿಗು ಹೆದರಿಸುತ್ತ, ಮಜಾ ತಗೋತ ಇದ್ದಿಯಲ್ಲ" ಎಂದ. ಅದಕ್ಕೆ ಮೈಲಾರಿ - " ಜಾಸ್ತಿನೆ ಆಯಿತು, ಏನಿವಾಗ, ನಿನ್ನ ತಲೆ, ಹೋಗಿ ನಿನ್ನ ಕೆಲಸ ನೋಡು" ಎಂದ. ರಾಜಣ್ಣನ ಪಿತ್ತ-ನೆತ್ತಿಗೇರಿ ಇನ್ನೇನು ಮೈಲಾರಿಗೆ ಎರಡು ತದುಕಬೇಕು ಎನ್ನುವಷ್ಟರಲ್ಲೇ ನಾವು ಹೋಗಿ - " ರಾಜಣ್ಣ, ಇವನಿಗೆ ನೀನು ಇಕ್ಕರೆ, ಇವನು ವಾರ್ದೆನ್ನಿನ ಕಿವಿ ಕಚ್ಚುವುದು ಕಾತರಿ, ಇವನಿಗೆ ಬೇರೆ ರೀತಿಯಲ್ಲಿ ಸಿಕ್ಕಿಸುವ" ಎಂದು ರಾಜನ್ನನ್ನನ್ನು ರೂಮಿನ ಒಳಗೆ ಕರೆ ತಂದು ಪುಸಲಾಯಿಸಿ ಕೂರಿಸಿಕೊಂಡು ಒಂದು ಪ್ಲಾನ್ ಮಾಡಿದೆವು . ನಮ್ಮ ಪ್ಲಾನು ಹೀಗಿತ್ತು - ಬಾಕಿ ಇರುವ ಬಾಳೆಹಣ್ಣನ್ನು ಮೈಲಾರಿಯ ರೂಮಿನಲ್ಲಿರುವ ಸತ್ಯನನ್ನು ಕರೆದು ಮೈಲಾರಿಯ ಬೀರುವಿನ ಒಳಗೆ ಅವಿಸಿಡುವ ಬಗ್ಗೆ ಪುಸಲಾಯಿಸಿ ಕಳಿಸುವುದು. ವಾರ್ಡನ್ನು ಬರುವ ಹೊತ್ತಿಗೆ ಜೋರು ಸ್ವರದಲ್ಲಿ - ತೋಟದಲ್ಲಿ ಬಾಳೆಗೊನೆ ಕಾಣೆಯಾಗಿರುವ ಬಗ್ಗೆ ಪುಕಾರು ಇರುವುದು, ಮತ್ತು ಅದು ಸತ್ಯನ ರೂಮಿನಲ್ಲಿ ಇರುವ ಬಗ್ಗೆ ಬೇರೆ ಹುಡುಗರು ಮಾತನಾಡಿಕೊಳ್ಳುತ್ತಿದ್ದಾರೆ ಎಂಬ ಸಾರಾಂಶ ಬರುವ ಹಾಗೆ ಮಾತನಾಡುವುದು ಎಂದು ನಾವು ನಾಲ್ಕು ಜನ ಮಾತನಾಡಿ,ಅವತ್ತು ಮಲಗಿಕೊಂಡೆವು. ಮರುದಿನ, ನಮ್ಮ ಪ್ಲಾನಿನ ಹಾಗೆ ಸತ್ಯ, ಮೈಲಾರಿ ರೂಮಿನಲ್ಲಿ ಇರದ ಹೊತ್ತಿನಲ್ಲಿ, ನಮ್ಮ ರೂಮಿನಿಂದ , ಅವನ ರೂಮಿಗೆ ಬಾಳೆಹಣ್ಣನ್ನು ತೆಗೆದುಕೊಂದು ಹೋಗಿ, ಮೈಲಾರಿಯ ಬೀರುವಿನ ಒಂದು ಮೂಲೆಯಲ್ಲಿ ಅವಿಸಿಟ್ಟ, ಆ ಸಂಜೆ, ವಾರ್ಡನ್ನು ನಮ್ಮ ರೂಮಿನ ಹತ್ತಿರ ಬಂದಾಗ ನಾವೆಲ್ಲಾ ಗಟ್ಟಿ ಸ್ವರದಲ್ಲಿ ರೂಮಿನ ಒಳಗೆ ಮುಂಚೆಯೇ ಮಾಡಿದ ಪ್ಲಾನಿನ ಹಾಗೆ ಮಾತನಾಡ್ತಾ ಇದ್ದೆವು . ವಾರ್ಡನ್ನು , ನಮ್ಮ ಮಾತನ್ನು ಕೇಳಿಸಿ ಕೊ೦ಡು, ಮೈಲಾರಿಯ ರೂಮಿಗೆ ಹೋಗಿ ಅವನ ರೂಮಿನ ತಲಾಶಿ ತೆಗೆಯಲು ಸಿಕ್ಕ ಬಾಳೆಹಣ್ಣು, ಅದನ್ನು ಕಂಡು, ಹೌಹಾರಿದ ಮೈಲಾರಿಯ ಇಂಗು ತಿಂದ ಮಂಗನ ಮೂತಿ ನೋಡಿ ನಾವೆಲ್ಲಾ ಒಂದು ವಾರದವರೆಗೂ ನಕ್ಕು-ನಕ್ಕು ಹೊಟ್ಟೆ . ಮೈಲಾರಿಗೆ ಒಂದು ವಾರ ಹಾಸ್ಟೆಲಿನ ಕಾರಿಡಾರು ಗುಡಿಸುವ ಶಿಕ್ಷೆಯಾಯಿತು. ಅಂದಿನಿಂದ ಅವನು ನಮ್ಮ ತಂಟೆಗೆ ಬರಲಿಲ್ಲ, ನಾವು ಅವನ ತಂಟೆಗೆ ಹೋಗಲಿಲ್ಲ.